Print

ಕನ್ನಡ ಸ್ವ-ಕಲಿಕೆ (Kannada self-learning)

ಪೋಷಕರಿಗೆ ಸಹಜವಾಗಿ ತಮ್ಮ ಮಕ್ಕಳು ತಮ್ಮ ಮಾತೃಭಾಷೆಯನ್ನು ಕಲಿಯಬೇಕು, ನುಡಿಯಬೇಕು ಬಳಸಬೇಕು ಎಂಬ ಆಸೆ ಇರುತ್ತದೆ. ಆದರೆ, ದೊಡ್ಡ ಸಮಸ್ಯೆ ಏನೆಂದರೆ ಮಕ್ಕಳಿಗೆ ಭಾಷೆಯನ್ನು ಕಲಿಸುವುದು ಹೇಗೆ ಎಂಬುದೇ. ಅದರಲ್ಲೂ ಕನ್ನಡದ ವಾತಾವರಣ ಅಪರೂಪವಾದ ವಿದೇಶದ ಪರಿಸರದಲ್ಲಿ, ಕನ್ನಡಿಗ ಪೋಷಕರಿಗೆ ಇದು ತುಂಬಾ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.

ಜಗತ್ತಿನೆಲ್ಲೆಡೆ ನಡೆಸಿರುವ ಕನ್ನಡಿಗರು ಅನಿವಾರ್ಯವಾಗಿ ಹಾಗೂ ಸ್ವಯಂ ಪ್ರೇರಿತರಾಗಿ ಕನ್ನಡ ಕಲಿಸುವ ಶಾಲೆಗಳನ್ನು ನಡೆಸುವುದಾಗಿದೆ. ಎಷ್ಟೋ ಮಂದಿ ಪೋಷಕರಿಗೆ, ಮಕ್ಕಳಿಗೆ ಈ ಕನ್ನಡ ಕಲಿ ಶಾಲೆಗಳು ವರದಾನವಾಗಿವೆ.

ಕನ್ನಡ ಕಲಿ ಶಾಲೆಗಳ ಪಾತ್ರ ಅತ್ಯಂತ ಮುಖ್ಯವಾದರೂ, ಇದೊಂದೇ ಭಾಷೆ ಕಲಿಯಲು ಪರಿಹಾರವಾಗಲು ಸಾಧ್ಯವಿಲ್ಲ. ವಾರಕ್ಕೊಮ್ಮೆ ಒಂದೆರಡು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮಗಳು, ಭಾಷೆಯನ್ನು ಶೈಕ್ಷಣಿಕ ದೃಷ್ಟಿಯಿಂದ ಮಾತ್ರ ಅಲ್ಲದೆ, – ಮನಸ್ಸುಗಳನ್ನು, ಸಂಬಂಧಗಳನ್ನು, ಸಂಸ್ಕೃತಿಯನ್ನು ಬೆಸೆಯುವ, ಬೆಳೆಸುವ ಹಾದಿಯಲ್ಲಿ ಕುಂಟುತ್ತವೆ.

ಕನ್ನಡ ಕಲಿ ಶಾಲೆಗಳನ್ನು ಅವಲಂಬಿಸಿರುವ ಬಹುತೇಕ ಮಕ್ಕಳು ಆರರಿಂದ 14 ವರ್ಷದವರು. ಅಂದರೆ, ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಓದುವ ಮಕ್ಕಳು. ಹೆಚ್ಚಿನ ಮಟ್ಟಿಗೆ, ಮಕ್ಕಳು, ಶಾಲೆಯಲ್ಲಿ ಕಲಿಯುವ ಇತರೆ ಶೈಕ್ಷಣಿಕ ಭಾಷೆಗಳಂತೆ ಕನ್ನಡವನ್ನೂ ಸಹ ಕಲಿಯುವ ಪ್ರಯತ್ನ ಮಾಡುತ್ತಾರೆ. ಓದು-ಬರಹ ಕಲಿಯುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾದರೂ, ಭಾಷೆಯನ್ನು ಸರಾಗವಾಗಿ ಮಾತನಾಡುವ, ಬಳಸುವುದು ಮಹಾ ಕಷ್ಟ ಅಥವಾ ಅಸಾಧ್ಯ ಎಂಬಂತೆ ಆಗುತ್ತದೆ. ಕನ್ನಡ ಪಠ್ಯವನ್ನು ಹೇಗೋ ಕಷ್ಟಪಟ್ಟು ಓದಿದರೂ, ಶಬ್ದಸಂಪತ್ತಿನ ಕೊರತೆಯಿಂದ ಬಹುಪಾಲು ಪದಗಳ ಅರ್ಥ ತಿಳಿಯದೆ ಹೋಗುವುದು ಸಾಮಾನ್ಯ. ಹಾಗೆಯೇ ಪಠ್ಯಪುಸ್ತಕದ ಕನ್ನಡಕ್ಕೂ ದೈನಂದಿನ ಕನ್ನಡಕ್ಕೂ ನಡುವೆ ಕಂಡು ಬರುವ ವ್ಯತ್ಯಾಸಗಳು ಭಾರಿ ಇಕ್ಕಟ್ಟಾಗಿ ತೋರುತ್ತದೆ. ಮಾತನಾಡುವುದೇ ಬೇರೆ, ಓದಿ ಬರೆಯುವುದೇ ಬೇರೆ ಎಂಬ ಭೂತ ಎದುರಾಗಿ, ಭಾಷೆಯನ್ನು ಸಿದ್ದಿಸಿಕೊಳ್ಳುವುದು ಕಷ್ಟಕರವಾಗುತ್ತದೆ.

ಬಹಳಷ್ಟು ಪೋಷಕರು ಕನ್ನಡ ಕಲಿ ಶಾಲೆಗಳಿಗೆ ಮಗುವನ್ನು ಕಳಿಸುತ್ತಿದ್ದೇವೆ, ಅದೇ ದೊಡ್ಡ ಕಾರ್ಯ ಎಂದೆನಿಸಿ ಕೈತೊಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ವರ್ಷಗಳಿಂದ ಕನ್ನಡ ಕಲಿ ಶಾಲೆಗೆ ಹೋಗುತ್ತಿದ್ದರೂ, ಮಗುವಿಗೆ ಭಾಷೆಯಲ್ಲಿ ಪ್ರಭುತ್ವ ಬಂದಿಲ್ಲವಲ್ಲ ಎಂದು ಪೇಚಾಡುತ್ತಾರೆ. ಕೊನೆಗೆ ಶಿಕ್ಷಕರಿಗೆ ಕಲಿಸಲು ಬರುವುದಿಲ್ಲ ಎಂದು ಅವರ ಮೇಲೆಯೇ ಗೂಬೆ ಕೂರಿಸುತ್ತಾರೆ.

ನೀವೇ ಪರೀಕ್ಷೆ ಮಾಡಿ ನೋಡಿ. ಬಹಳ ವರ್ಷಗಳಿಂದ ಕನ್ನಡದಲ್ಲಿ ಶಾಲೆಯಲ್ಲಿ ಕಲಿತ ಹದಿನೆಂಟರ ಆಸುಪಾಸಿನಲ್ಲಿರುವ ಕಿಶೋರರನ್ನು ಅಥವಾ ಯುವಕ/ಯುವತಿಯರನ್ನು ಯಾರಾದರೂ ಕನ್ನಡದಲ್ಲಿ ಮಾತನಾಡಿಸಿ ನೋಡಿ ಎಷ್ಟರಮಟ್ಟಿಗೆ ಅವರಿಗೆ ಕನ್ನಡ ಸಹ್ಯವೆನಿಸುತ್ತದೆ ಎಂದು. ಅವರಲ್ಲಿ ಏನಾದರೂ ಕನ್ನಡ ಒಂದಷ್ಟಾದರೂ ಉಳಿದಿದ್ದರೆ, ಅದಕ್ಕೆ ಕಾರಣ ಅವರ ಮನೆಯಲ್ಲಿ ಇನ್ನೂ ಕನ್ನಡ ಇರುವುದಕ್ಕಾಗಿಯೇ ವಿನಹ, ಯಾವಾಗಲೋ ಶಾಲೆಯಲ್ಲಿ ಕಲಿತ ಪ್ರಭಾವದಿಂದಲ್ಲ.

“ಮನೆಯಲ್ಲಿ ಕನ್ನಡ ಇದ್ದರೆ ಮಾತ್ರ ಮನದಲ್ಲೂ ಕನ್ನಡ ಉಳಿಯುತ್ತದೆ ಇಲ್ಲದಿದ್ದರೆ ಇಲ್ಲ” ಎಂಬ ಸತ್ಯವನ್ನು ಎಲ್ಲಾ ಪೋಷಕರು ಮನಗಾಣಬೇಕಿದೆ.

ಭಾಷೆಯ ಕಲಿಕೆಯಲ್ಲಿ ಮನೆಯ ವಾತಾವರಣ ಅತ್ಯಂತ ಪ್ರಮುಖವಾಗಿರುತ್ತದೆ. ನಿತ್ಯವೂ ಕನ್ನಡವನ್ನು ಮನೆಯಲ್ಲಿ ಬಳಸದೆಯೇ ಮಕ್ಕಳಿಗೆ ಪವಾಡ ಸದೃಶ ರೀತಿಯಲ್ಲಿ ವಾರಕ್ಕೊಮ್ಮೆ ನಡೆಯುವ ತರಗತಿಗಳ ಮೂಲಕ ಕನ್ನಡವನ್ನು ಸಿದ್ಧಿಸಿಕೊಳ್ಳುವ ಪೋಷಕರ ಬಯಕೆ ಸಮಂಜಸವಾದುದೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಭಾಷೆಯನ್ನು ಏಕೆ ಕಲಿಯಬೇಕು? – ಮಗುವಿನ ದೃಷ್ಟಿಯಿಂದ ಒಮ್ಮೆ ಆಲೋಚಿಸಿ ನೋಡಿ. ಮನೆಯಲ್ಲಿ ಸಹಜವಾಗಿಯೇ ಭಾಷೆ ಇದ್ದದ್ದೇ ಆದರೆ ಈ ಪ್ರಶ್ನೆಗೆ ಅವಕಾಶ ಇಲ್ಲದೆಯೇ ಮಾತು ಬರುತ್ತಿದ್ದಂತೆಯೇ ಮಗು ಸಹಜವಾಗಿ ಭಾಷೆಯನ್ನು ಅಪ್ಪಿಕೊಳ್ಳುತ್ತದೆ. ಇಲ್ಲದೆ ಹೋದರೆ, ಇದನ್ನು ಕಲಿಯುವುದರಿಂದ ನನಗೇನು ಲಾಭ ಎಂಬ ಸಾಮಾನ್ಯ ಪ್ರಶ್ನೆ ಮನಸ್ಸಿನಲ್ಲಿ ಕಾಡುವುದು. ಮಗುವಿನ ಬೆಳವಣಿಗೆ ಸಹಜವಾಗಿಯೇ ಕೌಟುಂಬಿಕ, ಸಾಮಾಜಿಕ ವಾತಾವರಣಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತದೆ. ವಾತಾವರಣದಲ್ಲಿ ಭಾಷೆಯು ಸೇರಿಕೊಂಡಿದ್ದರೆ, ಭಾಷೆಯನ್ನು ಕಲಿಯುವ ಪ್ರಕ್ರಿಯೆ ಕೂಡ ತಾನೇ ತಾನಾಗಿ ನಡೆಯುತ್ತಿರುತ್ತದೆ. ಮನೆಯ ವಾತಾವರಣಕ್ಕೂ ಹಾಗೂ ಹೊರಗಿನ ವಾತಾವರಣಕ್ಕೂ ವ್ಯತ್ಯಾಸ ಹೆಚ್ಚಾಗುತ್ತಿದ್ದಂತೆ ಮಗುವು ತನ್ನದೇ ಆದ ರೀತಿಯಲ್ಲಿ ತನಗಿಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಹಾಗೆಯೇ ತನ್ನ ಮನಸ್ಸಿಗೆ ಇಷ್ಟವಾದ ಪ್ರಕ್ರಿಯೆಯನ್ನು ಪ್ರಯೋಗಿಸುತ್ತಾ ಅದನ್ನು ತನ್ನ ಸುತ್ತಲಿನ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕೂಡ ಅವಲೋಕಿಸುತ್ತದೆ. ಮನೆಯಲ್ಲಿ ಪೋಷಕರು ಕನ್ನಡ ಮಾತನಾಡುತ್ತಿದ್ದರೂ, ಅದು ಅರ್ಥವಾದರೂ ಸಹ ಇಂಗ್ಲಿಷ್ನಲ್ಲಿಯೇ ವ್ಯವಹರಿಸುವ ಮಕ್ಕಳನ್ನು ಇದಕ್ಕೆ ಉದಾಹರಣೆಯಾಗಿ ನಾವು ನೋಡಬಹುದು.

ಅಯಾಚಿತವಾದ ಕಲಿಕೆಗೆ (involuntary natural learning) ಪೂರಕವಾದ ವಾತಾವರಣವನ್ನು ಕಲ್ಪಿಸುವುದು ಪೋಷಕರ ಜವಾಬ್ದಾರಿ. ಹಾಗೆ ಆಗದೆ ಇದ್ದ ಪಕ್ಷದಲ್ಲಿ ಸುಲಭವಾಗಿ ಕೈಚೆಲ್ಲದೆ ಪೋಷಕರು ಮಾಡಬೇಕಾಗಿದೆ ಆಯೋಜಿತವಾಗಿ (planned learning) ಕಲಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕಿದೆ.

ಸ್ವ ಕಲಿಕೆ ಎಂಬ ವಿಧಾನ ಅಯಾಚಿತವಾದ ಕಲಿಕೆಗೆ ಪೂರಕವಾದ ವಿಧಾನ. ಚಿಕ್ಕವಯಸ್ಸಿನಿಂದಲೇ ಮಗುವು ತನ್ನ ಪರಿಸರದಲ್ಲಿ ದೊರೆಯುವ ವಸ್ತುಗಳನ್ನು ಆಟಿಕೆಯ ರೀತಿಯಲ್ಲಿ ಉಪಯೋಗಿಸುತ್ತಾ ತನ್ನ ಅನುಭವವನ್ನು ಹಿರಿದಾಗಿಸಿಕೊಳ್ಳುತ್ತಾ ಕಲಿಯುತ್ತದೆ. ಕಲಿಕೆಯು ಆಟವೆಂದು ಅನಿಸತೊಡಗಿದಾಗ ಸ್ವ ಕಲಿಕೆಗೆ ಎಡೆಮಾಡಿಕೊಡುತ್ತದೆ. ಇಲ್ಲದಿದ್ದಲ್ಲಿ ಅದು ಪಾಠವಾಗಿ ಬಿಡುತ್ತದೆ. ವಿಷಯಗಳನ್ನು ಶಾಲೆಯಲ್ಲಿ ಕಲಿಯುವುದಕ್ಕೂ, ಹಾಗೂ ಸ್ಮಾರ್ಟ್ ಫೋನ್ ಅಥವಾ ಇತರೆ ಗ್ಯಾಜೆಟ್ಗಳನ್ನು ತಾನೇತಾನಾಗಿ ಸಲೀಸಾಗಿ ಮಗು ಕಲಿಯುವ ವ್ಯತ್ಯಾಸವನ್ನು ನಾವು ಗಮನಿಸಿರುತ್ತೇವೆ.

Learning through Gamification

ಆಟದ ಮೂಲಕ ಪಾಠ

ಆಟದ ಮೂಲಕ ಪಾಠ ಹೊಸತೇನಲ್ಲ. ಆದರೆ ಶಾಲೆಯಲ್ಲಿ ಇದನ್ನು ಕಲಿಯುವ, ಕಲಿಸುವ ಪ್ರಕ್ರಿಯೆ ಸ್ವಲ್ಪ ಹೊಸತು. ಆಟದ ಮೂಲಕ ಪಾಠ ಕೆಲವೇ ಉಪಾಧ್ಯಾಯರ ವೈಶಿಷ್ಟ್ಯ ಆಗಿತ್ತೇ ಹೊರತು ಎಲ್ಲಾ ಕಡೆ ದೊರೆಯುವಂತೆ ಇರಲಿಲ್ಲ. ಈಗ ತಂತ್ರಜ್ಞಾನ ಮುಂದುವರೆದಿರುವುದರಿಂದ ಎಲ್ಲರಿಗೂ ತಂತ್ರಜ್ಞಾನದ ಮೂಲಕ ಕಲಿಕೆಯು ಕೂಡ ಕೈಗೆಟುಕುವಂತೆ ಆಗಿದೆ. ಮಕ್ಕಳಿಗೆ ತಂತ್ರಜ್ಞಾನ ಸ್ವ ಕಲಿಕೆಯ ಒಂದು ಮಹತ್ವಪೂರ್ಣ ದಾರಿಯಾಗಿದೆ.

ಕನ್ನಡ ಕಲಿಸುವಲ್ಲಿ ಪೋಷಕರಿಗೆ ಎದುರಾಗುವ ತೊಡಕುಗಳಲ್ಲಿ ಮುಖ್ಯವಾದದ್ದು ಯಾವ ವಯಸ್ಸಿನಿಂದ ಕನ್ನಡವನ್ನು ಕಲಿಸಬೇಕು ಎಂಬುದು, ಹಾಗೆಯೇ ಯಾವುದನ್ನು ಕಲಿಸಬೇಕು ಹೇಗೆ ಮುಂದುವರಿಸಬೇಕು ಎಂಬುದೆಲ್ಲ ಪೋಷಕರಿಗೆ ತಲೆನೋವಾಗಿ ಪರಿಣಮಿಸುತ್ತದೆ. ಸ್ವ ಕಲಿಕೆಯ ಮಾರ್ಗವನ್ನು ಅನುಸರಿಸಿದಲ್ಲಿ ಮಾತು ಕಲಿಯುತ್ತಿರುವ ಮಗುವೂ ಸಹ ಕನ್ನಡವನ್ನು ಚಿಕ್ಕವಯಸ್ಸಿನಿಂದಲೇ ಕಲಿಯುವ ಅವಕಾಶ ಹೆಚ್ಚಾಗುತ್ತದೆ. ನಾವೆಲ್ಲ ತಿಳಿದಿರುವಂತೆ ಭಾಷೆಯ ಮೊದಲ ಕಲಿಕೆ ಕೇಳುವುದರಿಂದ ಮಾತನಾಡುವುದರಿಂದ ಮೊದಲಾಗುತ್ತದೆ. ಓದು-ಬರಹ ತದನಂತರದ್ದು. ಹೆಚ್ಚಿನ ಕನ್ನಡ ಕಲಿಕೆಯ ಶಾಲೆಗಳು ಓದು ಬರಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಮಾತುಕತೆ ಹಿಂದೆ ಉಳಿಯುತ್ತದೆ. ಹೆಚ್ಚಿನ ಮಕ್ಕಳು ಕನ್ನಡವನ್ನು ಓದುವ ಬರೆಯುವ ಶಕ್ತಿಯನ್ನು ಸಂಪಾದಿಸಿಕೊಂಡರೂ ಆರಾಮಾಗಿ ಕನ್ನಡ ಮಾತನಾಡುವ ಅರ್ಥಮಾಡಿಕೊಳ್ಳುವ ಶಕ್ತಿ ಕುಂಠಿತವಾಗಿರುತ್ತದೆ. ಬೆಳೆದ ಮಕ್ಕಳನ್ನು ಕನ್ನಡ ಕಲಿಕೆಗೆ ತಡವಾಗಿ ತೊಡಗಿಸಿದಾಗ ಅವರು ಪಡುವ ಕಷ್ಟವನ್ನು ಹಾಗೆಯೇ ಕಲಿಕೆಯನ್ನು ವಿರೋಧಿಸುವ ಮನೋಭಾವವನ್ನು ಕೂಡ ನಾವು ಕಾಣಬಹುದು. ಆದ್ದರಿಂದ ಕನ್ನಡ ಅಕ್ಷರ, ಶಬ್ದ, ಪದ, ಪದ್ಯ, ಬರಹ ಇವುಗಳ ಪರಿಚಯ ಚಿಕ್ಕಂದಿನಿಂದಲೇ ಆದಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಯು ಸುಲಭವಾಗಿ ಆಗುವುದಲ್ಲದೆ, ಬೆಳೆಯುತ್ತಿರುವಂತೆ ಭಾಷೆಯಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಅನುಕೂಲವಾಗುತ್ತದೆ.

ಫೋನ್ ಅಥವಾ ಗ್ಯಾಜೆಟ್ ಆಪ್ ಗಳ ಮಹತ್ವ ಹೆಚ್ಚು. ಶಿಕ್ಷಣವು ಆಟದ ಮೂಲಕ ನಡೆದಾಗ ಅದರ ಕಲಿಕೆಯು ಸಹಜವೂ ತೀವ್ರಗತಿಯಲ್ಲಿಯೂ ನಡೆಯುವ ಅವಕಾಶಗಳು ಹೆಚ್ಚು.

ಕನ್ನಡ ವರ್ಣಮಾಲೆ, ಅಕ್ಷರಗಳನ್ನು ಬರೆಯುವ, ಉಚ್ಚರಿಸುವ, ಕಾಗುಣಿತ ಪದಜೋಡಣೆ ಪದಕೋಶ ವಾಕ್ಯ ಪರಿಚಯ ಇದೇ ಮುಂತಾದ ಕಲಿಕಾಂಶಗಳನ್ನು ಆಪ್ ಮೂಲಕ ಮಾಡಿದಲ್ಲಿ ಮನೆಯಲ್ಲಿಯೇ ಕುಳಿತು ತಮಗೆ ಅನುಕೂಲಕರವಾದ ವಾತಾವರಣದಲ್ಲಿ ಸಮಯದ ಮಿತಿ ಇಲ್ಲದೆ ಆಟವಾಡುತ್ತಲೇ ಕನ್ನಡವನ್ನು ಶೀಘ್ರವಾಗಿ ಕಲಿಯುವ ಅವಕಾಶ ಹೆಚ್ಚಿರುತ್ತದೆ. ಪೋಷಕರು ಕೂಡ ಮಕ್ಕಳ ಜೊತೆಯಲ್ಲಿ ಈ ಬಗೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಅವರ ಕಲಿಕೆ ಹಾಗೂ ಭಾಷೆಯ ಬಗೆಗಿನ ಧೋರಣೆ ಬದಲಾಗಿ ಅಭಿಮಾನ ಇಮ್ಮಡಿಸುತ್ತದೆ. ವಾರಾಂತ್ಯದ ಒಂದೆರಡು ಗಂಟೆಗಳ ತರಗತಿ ಎಂಬ ಒತ್ತಾಯಪೂರ್ವಕ ಕಲಿಕೆಗಿಂತ ಆಪ್ ಮೂಲಕ ಖುಷಿ ತರುವ ಕಲಿಕೆಯು ಮಕ್ಕಳಿಗೂ ಪೋಷಕರಿಗೂ ವರದಾನವಲ್ಲವೇ? ಉಪಯೋಗಿಸಿ ನೋಡಿ ಹಾಗೆಯೇ ಕನ್ನಡ ಆಪ್ ಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿ

Leave a Reply

Your email address will not be published. Required fields are marked *

Table of Contents